| ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗಲಿದೆ ದರ್ಶನ ಅಂಡ್ ಗ್ಯಾಂಗ್ | |
| ಬೆಂಗಳೂರು,ಜೂ.22-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ವಿಜಯನಗರ ಉಪವಿಭಾಗದ ಪೊಲೀಸರು ಸಂಜೆ ವೇಳೆಗೆ ಈ ನಾಲ್ವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. | |
| ಆರೋಪಿಗಳಾದ ನಟ ದರ್ಶನ್ ಹಾಗೂ ಆತನ ಗ್ಯಾಂಗ್‌ನ ವಿನಯ್, ಧನರಾಜ್ ಮತ್ತು ಪ್ರದೋಷ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಮತ್ತೆ ತಮ ವಶಕ್ಕೆ ಪಡೆದು ಇನ್ನಷ್ಟು ಹೇಳಿಕೆಗಳನ್ನು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಇಂದು ಮತ್ತೆ ನ್ಯಾಯಾಲಯದ ಮುಂದೆ ಈ ನಾಲ್ವರನ್ನು ಹಾಜರುಪಡಿಸಲಾಗುತ್ತದೆ. ಒಟ್ಟು 12 ದಿನಗಳ ಕಾಲ ವಿಚಾರಣೆ ನಡೆಸಿರುವ ಪೊಲೀಸರು ಬಹುತೇಕ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. | |
| ಒಟ್ಟಾರೆ ಈ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುವಂತೆ ಕಾಣುತ್ತಿದೆ.ಈಗಾಗಲೇ ಈ ಪ್ರಕರಣದಲ್ಲಿ ಪವಿತ್ರಾಗೌಡ ಸೇರಿದಂತೆ 9 ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ನಟ ದರ್ಶನ್ ಹಾಗೂ ಉಳಿದ ಆರೋಪಿಗಳು ಇಂದು ಪರಪ್ಪನ ಅಗ್ರಹಾರ ಸೇರುವುದು ಖಚಿತ ಎನ್ನಲಾಗುತ್ತಿದೆ. | |
| ಸ್ಥಳಮಹಜರು ವೇಳೆ ದರ್ಶನ್ ಮನೆಯಲ್ಲಿ ಪತ್ತೆಯಾದ 37 ಲಕ್ಷ ಹಣದ ಮೂಲದ ಬಗ್ಗೆ ಮಾಹಿತಿ ಪಡೆಯಲು ದರ್ಶನ್‌ನನ್ನು ಮಾತ್ರ ಮತ್ತೇನಾದರೂ ಪೊಲೀಸರು ತಮ ಕಸ್ಟಡಿಗೆ ಪಡೆಯಬಹುದೆಂಬುದನ್ನು ಅಲ್ಲಗಳೆಯುವಂತಿಲ್ಲ. | |
| ಬಿಗಿ ಭದ್ರತೆ :ಇಂದು ನ್ಯಾಯಾಲಯಕ್ಕೆ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕರೆದೊಯ್ಯಲಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.ಅಭಿಮಾನಿಗಳು ನ್ಯಾಯಾಲಯದ ಬಳಿ ಹೆಚ್ಚಾಗಿ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ಸಹಿತ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. | |
| ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಜಯನಗರ ಉಪವಿಭಾಗದ ಪೊಲೀಸರು 130ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಈ ಆರೋಪಿಗಳಿಗೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. |